ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಕೇಡಿ ಸಿನಿಮಾ ರಿಲೀಸ್‌ಗೆ ಸಜ್ಜಾಗಿರುವ ವೇಳೆ, ನಿರ್ದೇಶಕ ಜೋಗಿ ಪ್ರೇಮ್ ಅವರಿಗೆ ಸೆನ್ಸಾರ್ ಹಂತದಲ್ಲೇ ಅಡ್ಡಿ ಎದುರಾಗಿದೆ. ಇದೇ ರೀತಿಯ ಸಮಸ್ಯೆ ಮೊದಲು ಜನನಾಯಕನ್ ಸಿನಿಮಾಗಿಗೂ ಎದುರಾಗಿದ್ದ ಹಿನ್ನೆಲೆಯಲ್ಲಿ, ಇದೀಗ ‘ಕೆಡಿ’ಗೂ ಅದೇ ಪರಿಸ್ಥಿತಿ ಮರುಕಳಿಸಿದೆ ಎಂಬ ಚರ್ಚೆ ಸಿನಿಮಾ ವಲಯದಲ್ಲಿ ಜೋರಾಗಿದೆ.
ಧ್ರುವ ಸರ್ಜಾ, ರೀಷ್ಮಾ ನಾಣಯ್ಯ, ಸಂಜಯ್ ದತ್, ಶಿಲ್ಪಾ ಶೆಟ್ಟಿ ಹಾಗೂ ರವಿಚಂದ್ರನ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರ ಇದೇ ತಿಂಗಳ 30ರಂದು ಬಿಡುಗಡೆಯಾಗಲಿದೆ. ಆದರೆ ಅದಕ್ಕೂ ಮುನ್ನ ನಡೆಯಬೇಕಾದ ಸೆನ್ಸಾರ್ ಪ್ರಕ್ರಿಯೆಯಲ್ಲಿ ತೊಂದರೆ ಉಂಟಾಗಿದೆ.
ಈಗಾಗಲೇ ಪ್ರಾದೇಶಿಕ ಸೆನ್ಸಾರ್ ಮಂಡಳಿ ಚಿತ್ರವನ್ನು ವೀಕ್ಷಿಸಿ, ರಕ್ತಪಾತದ ದೃಶ್ಯಗಳ ಹಿನ್ನೆಲೆ ‘A’ ಪ್ರಮಾಣಪತ್ರ ನೀಡಲು ಸೂಚಿಸಿದೆ. ಜೊತೆಗೆ ಒಂದು ಹಾಡಿನ ಸಾಹಿತ್ಯದಲ್ಲಿ ಎರಡು ಸಾಲುಗಳನ್ನು ಬದಲಾಯಿಸಲು ನಿರ್ದೇಶನ ನೀಡಿತ್ತು. ಚಿತ್ರತಂಡವೂ ಈ ಸೂಚನೆಗಳನ್ನು ಪಾಲಿಸಲು ಸಿದ್ಧವಾಗಿತ್ತು.
ಆದರೆ ಅಚ್ಚರಿಯ ತಿರುವಿನಲ್ಲಿ, ಮುಂಬೈನ ಕೇಂದ್ರ ಸೆನ್ಸಾರ್ ಮಂಡಳಿ ಈ ನಿರ್ಧಾರವನ್ನು ಅಂತಿಮಗೊಳಿಸದೇ, ಚಿತ್ರವನ್ನು ರಿವೈಸಿಂಗ್ ಕಮಿಟಿಗೆ ಕಳುಹಿಸಿದೆ. ನಿರ್ದೇಶಕ, ನಿರ್ಮಾಪಕ ಅಥವಾ ಪ್ರಾದೇಶಿಕ ಮಂಡಳಿಯ ಗಮನಕ್ಕೆ ತರುವುದಕ್ಕೂ ಮುನ್ನ ಈ ಕ್ರಮ ಕೈಗೊಂಡಿರುವುದು ವಿವಾದಕ್ಕೆ ಕಾರಣವಾಗಿದೆ.
ಈ ಬೆಳವಣಿಗೆಯಿಂದ ಕನ್ನಡ ಚಿತ್ರರಂಗದಲ್ಲಿ ಅಸಮಾಧಾನ ಹೆಚ್ಚಾಗಿದೆ. ಕೇಂದ್ರ ಮಟ್ಟದಲ್ಲಿ ಕನ್ನಡ ಸಿನಿಮಾಗಳಿಗೆ ಅನ್ಯಾಯವಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಇದೇ ರೀತಿಯ ಸಮಸ್ಯೆ ಇತ್ತೀಚೆಗೆ ಇನ್ನೂ ಕೆಲವು ಚಿತ್ರಗಳಿಗೂ ಎದುರಾದ ಹಿನ್ನೆಲೆ, ಈ ವಿಚಾರ ದೊಡ್ಡ ಚರ್ಚೆಗೆ ಕಾರಣವಾಗಿದೆ.
ಇದೀಗ ‘ಕೆಡಿ’ ಸಿನಿಮಾ ನಿಗದಿತ ದಿನಾಂಕಕ್ಕೆ ಬಿಡುಗಡೆಯಾಗುತ್ತದೆಯೇ ಎಂಬ ಅನುಮಾನ ಮೂಡಿದೆ. ಚಿತ್ರತಂಡವು ಸೆನ್ಸಾರ್ ಸಮಸ್ಯೆಯನ್ನು ಶೀಘ್ರದಲ್ಲೇ ಬಗೆಹರಿಸಲು ಪ್ರಯತ್ನಿಸುತ್ತಿದ್ದು, ಅಭಿಮಾನಿಗಳು ಬಿಡುಗಡೆ ದಿನಾಂಕದ ಬಗ್ಗೆ ಆತಂಕದಲ್ಲಿದ್ದಾರೆ.
ಚಿತ್ರದ ಭವಿಷ್ಯ ಈಗ ಸೆನ್ಸಾರ್ ರಿವೈಸಿಂಗ್ ಕಮಿಟಿಯ ನಿರ್ಧಾರಕ್ಕೆ ಅವಲಂಬಿತವಾಗಿದ್ದು, ಮುಂದಿನ ಕೆಲ ದಿನಗಳಲ್ಲಿ ಸ್ಪಷ್ಟತೆ ಸಿಗುವ ನಿರೀಕ್ಷೆಯಿದೆ.

