ಮಂಡ್ಯ ಜಿಲ್ಲೆಯ ಆದಿಚುಂಚನಗಿರಿ ಮಠ ನಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಗುರು ಭೈರವೈಕ್ಯ ಮಂದಿರದ ಲೋಕಾರ್ಪಣೆಗೆ ಕ್ಷಣಗಣನೆ ಆರಂಭವಾಗಿದೆ. ನಾಳೆ ಏಪ್ರಿಲ್ 15 ರಂದು ನಡೆಯಲಿರುವ ಈ ಭವ್ಯ ಸಮಾರಂಭದಲ್ಲಿ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಗವಹಿಸಿ ಮಂದಿರವನ್ನು ಉದ್ಘಾಟಿಸಲಿದ್ದಾರೆ.
ಈ ಹಿನ್ನೆಲೆಯಲ್ಲಿ ಆದಿಚುಂಚನಗಿರಿ ಕ್ಷೇತ್ರದಲ್ಲಿ ಭಕ್ತರ ಸಂಚಾರ ಹೆಚ್ಚಾಗಿದ್ದು, ಎಲ್ಲೆಡೆ ಹಬ್ಬದ ವಾತಾವರಣ ಕಾಣುತ್ತಿದೆ. ಮಠದ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರ ದಿವ್ಯ ಸಾನ್ನಿಧ್ಯದಲ್ಲಿ ಹಲವು ಧಾರ್ಮಿಕ ಕಾರ್ಯಕ್ರಮಗಳು ಭರದಿಂದ ಸಾಗುತ್ತಿವೆ. ವಿಶೇಷ ಹೋಮ-ಹವನಗಳು, ಪೂಜಾ ಕೈಂಕರ್ಯಗಳು ಈಗಾಗಲೇ ಪ್ರಾರಂಭವಾಗಿದ್ದು, ದೇಶದ ವಿವಿಧ ಭಾಗಗಳಿಂದ ಭಕ್ತರು ಆಗಮಿಸುತ್ತಿದ್ದಾರೆ.
ಸಮಾರಂಭವನ್ನು ಯಶಸ್ವಿಯಾಗಿ ನಡೆಸಲು ಮಂಡ್ಯ ಜಿಲ್ಲಾಡಳಿತ ಭಾರಿ ಸಿದ್ಧತೆಗಳನ್ನು ಕೈಗೊಂಡಿದೆ. ಪ್ರಧಾನಮಂತ್ರಿ ಅವರ ಕಾರ್ಯಕ್ರಮಕ್ಕಾಗಿ ಭವ್ಯ ವೇದಿಕೆ ನಿರ್ಮಿಸಲಾಗಿದ್ದು, ಸಾವಿರಾರು ಭಕ್ತರನ್ನು ಸೇರಿಸಿಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ, ಸ್ವಚ್ಛತೆ, ಕುಡಿಯುವ ನೀರು, ವಾಹನ ನಿಲುಗಡೆ ಸೇರಿದಂತೆ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗಿದೆ.ಪ್ರಧಾನಿ ಮೋದಿ ಅವರ ಆಗಮನದ ಹಿನ್ನೆಲೆಯಲ್ಲಿ ಭದ್ರತೆಯನ್ನು ಅತ್ಯಂತ ಕಠಿಣಗೊಳಿಸಲಾಗಿದೆ. ಚುಂಚನಗಿರಿ ಪ್ರದೇಶದಲ್ಲಿ ವಿಶೇಷ ಹೆಲಿಪ್ಯಾಡ್ ನಿರ್ಮಿಸಲಾಗಿದ್ದು, ಭದ್ರತೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಭದ್ರತಾ ವ್ಯವಸ್ಥೆಯಲ್ಲಿ 5 ಎಸ್‌ಪಿ, 10 ಎಎಸ್‌ಪಿ, 15 ಡೈಎಸ್‌ಪಿ, 40 ಪಿಐ, 151 ಪಿಎಸ್‌ಐ, 92 ಎಎಸ್‌ಐ, 1700 ಹೆಡ್ ಕಾನ್ಸ್‌ಟೇಬಲ್‌ಗಳೊಂದಿಗೆ 8 KSRP, 10 DAR, 5 QRT ತಂಡಗಳು ಹಾಗೂ 10 ASC ತಂಡಗಳನ್ನು ನಿಯೋಜಿಸಲಾಗಿದೆ.
ಈ ಭವ್ಯ ಕಾರ್ಯಕ್ರಮದ ಮೂಲಕ ಆದಿಚುಂಚನಗಿರಿ ಮಠದ ಆಧ್ಯಾತ್ಮಿಕ ವೈಭವ ಮತ್ತಷ್ಟು ಬೆಳಗಲಿದೆ. ಪ್ರಧಾನಿ ಮೋದಿ ಅವರ ಭೇಟಿ ಹಿನ್ನೆಲೆಯಲ್ಲಿ ಈ ಸಮಾರಂಭ ರಾಷ್ಟ್ರದ ಗಮನ ಸೆಳೆಯುವಂತಾಗಿದೆ. ಭಕ್ತರಲ್ಲಿ ಅಪಾರ ಉತ್ಸಾಹ ಕಂಡುಬರುತ್ತಿದ್ದು, ಕಾರ್ಯಕ್ರಮ ಯಶಸ್ವಿಯಾಗುವ ನಿರೀಕ್ಷೆ ವ್ಯಕ್ತವಾಗಿದೆ.

